ಪೇನಾರಿ  - 
ಸ್ಟರ್‍ಕೂಲಿಯೇಸೀ ಕುಟುಂಬಕ್ಕೆ ಸೇರಿದ ಅಲಂಕಾರ ವೃಕ್ಷ.  ಸ್ಟರ್‍ಕೂಲಿಯ ಫೀಟೆಡ ಇದರ ಶಾಸ್ತ್ರೀಯ ನಾಮ.  ಭಟಲಪೇನಾರಿ, ಪೀನಾರಿ, ಭೇತಾಳ ಮುಂತಾದ ಹೆಸರುಗಳೂ ಇದಕ್ಕುಂಟು.  ಇದು ಮಧ್ಯಮ ಎತ್ತರದ ಚೆಲುವಾದ ಮರ.  ಸುಮಾರು 30 ಮೀ. ಎತ್ತರಕ್ಕೆ ಬೆಳೆಯುವುದೂ ಉಂಟು.  ಇದರ ತೊಗಟೆ ಬಿಳಿ ಬಣ್ಣದ್ದು.  ಎಲೆಗಳು ಹಸ್ತಾಕಾರದವು.  ಒಂದೊಂದು ಎಲೆಯಲ್ಲೂ 5-9 ಕಿರು ಎಲೆಗಳುಂಟು.  ಹೂಗಳೂ ಮಾಸಲು ಕಿತ್ತಳೆ ಬಣ್ಣಕ್ಕಿವೆ.  ಹೂಗಳಿಗೆ ದುರ್ವಾಸನೆಯಿದೆ.  ಫಲಗಳು ದೋಣಿಯಾಕಾರದಲ್ಲಿವೆ.  ಒಳಗೆ 10-15 ಕಪ್ಪು ಬಣ್ಣದ ಬೀಜಗಳುಂಟು.
ಪೇನಾರಿಯನ್ನು ಬೀಜದಿಂದ ಇಲ್ಲವೇ ಕಾಂಡತುಂಡುಗಳಿಂದ ವೃದ್ಧಿಸಬಹುದು.  ಸ್ವಾಭಾವಿಕವಾಗಿ ಈ ಮರ ಕೊಂಕಣ ಸೀಮೆಯಿಂದ ದಕ್ಷಿಣಕ್ಕೆ ಪಶ್ಚಿಮ ಘಟ್ಟಗಳಲ್ಲಿ ಬೆಳೆಯುತ್ತದೆ.  ಪೇನಾರಿಯ ಬೀಜಗಳನ್ನು ಹಸಿಯಾಗಿಯೋ ಹುರಿದೋ ತಿನ್ನುವುದಿದೆ.  ಇದರ ಚೌಬೀನೆಯನ್ನು ಮರಗೆಲಸಕ್ಕೆ ಬಳಸುವುದುಂಟು.  ಮರದಿಂದ ಒದಗುವ ಗೋಂದು ಪುಸ್ತಕ ರಟ್ಟು ಕಟ್ಟುವಿಕೆಯಲ್ಲಿ ಬಳಕೆಯಾಗುತ್ತದೆ.  ತೊಗಟೆಯಿಂದ ಒಂದು ತೆರನ ನಾರು ಲಭಿಸುತ್ತಿದ್ದು ಅದರಿಂದ ಹುರಿ, ಹಗ್ಗ ಹೊಸೆಯುವುದುಂಟು.
(ಎಂ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ